ರಾಜ್ಯಮಟ್ಟದ 39ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳ

ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಪುರಸ್ಕೃತ ಯುಗಯೋಗಿ ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮಿಗಳವರ
ಶ್ರೀಗುರು ಸಂಸ್ಮರಣೋತ್ಸವ ಮತ್ತು ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ
ಹಾಗೂ
ರಾಜ್ಯಮಟ್ಟದ 39ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳ
ದಿನಾಂಕ : 23-09-2017ರಿಂದ 25-09-2017ರವರೆಗೆ

ಶ್ರೀಕ್ಷೇತ್ರ ಆದಿಚುಂಚನಗಿರಿ, 11-09-2017
ಪುರಾಣೇತಿಹಾಸ ಪ್ರಸಿದ್ಧವೂ, ದಿವ್ಯಧರ್ಮಪೀಠವೂ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಕಲಾಪೋಷಕ ಪೋಷಣೆಯಿಂದ ಕಂಗೊಳಿಸುತ್ತಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 71ನೇ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು “ಪದ್ಮಭೂಷಣ” ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಶ್ರೀಗುರು ಸಂಸ್ಮರಣೋತ್ಸವ ಮತ್ತು ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯಮಟ್ಟದ 39ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾ ಮೇಳದ ಕಾರ್ಯಕ್ರಮಗಳು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ದಿನಾಂಕ: 23-09-2017 ರಿಂದ 25-09-2017ರವರೆಗೆ ನಡೆಯಲಿದೆ.

ಪರಮಪೂಜ್ಯ ಜಗದ್ಗುರು “ಪದ್ಮಭೂಷಣ” ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಕಳೆದ 39ವರ್ಷಗಳಿಂದ ಜಾನಪದ ಕಲೆಗಳನ್ನು, ಜಾನಪದ ಕಲಾವಿದರ ಬದಕನ್ನು ಹಸನುಗೊಳಿಸುವ ಸಲುವಾಗಿ ಪಟ್ಟಾಭಿಷೇಕ ಮಹೋತ್ಸವ ಸಂದರ್ಭದಲ್ಲಿ ರಾಜ್ಯಮಟ್ಟದ ಜಾನಪದ ಕಲಾಮೇಳವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಪರಮಪೂಜ್ಯ ಗುರೂಜಿಯವರ ಸಂಸ್ಮರಣೋತ್ಸವದ ಶುಭ ಸಂದರ್ಭದಲ್ಲಿ 39ನೇ ರಾಜ್ಯಮಟ್ಟದ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳವನ್ನು ಹಮ್ಮಿಕೊಳ್ಳಲಾಗಿದೆ.

ದಿನಾಂಕ: 23-09-2017ರಂದು ಸಂಜೆ 3.00 ಗಂಟೆಗೆ 39ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳ ಉದ್ಘಾಟನೆಗೊಳ್ಳಲಿದೆ. ದಿನಾಂಕ: 24-09-2017ರ ಬೆಳಗ್ಗೆ 10.00 ಗಂಟೆಗೆ ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಲಿದೆ. ಇದೇ ದಿನ ಸಂಜೆ 5.00 ಗಂಟೆಗೆ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಮುತ್ತಿನ ಪಾಲಕಿ ಉತ್ಸವ ಹಾಗೂ ಜಾನಪದ ಕಲಾವಿದರ ವರ್ಣರಂಜಿತ ಮೆರವಣಿಗೆ ಹಾಗೂ ಸಂಜೆ 6.30ಕ್ಕೆ ಶ್ರೀ ಕಾಲಭೈರವೇಶ್ವರಸ್ವಾಮಿ ಪುಷ್ಕರಣೆಯಲ್ಲಿ ತೆಪ್ಪೋತ್ಸವ ಜರುಗುತ್ತದೆ. ದಿನಾಂಕ: 25-09-2017ರಂದು ಬೆಳಗ್ಗೆ 10.00 ಗಂಟೆಗೆ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಶ್ರೀಗುರು ಸಂಸ್ಮರಣೆ ಮತ್ತು ರಾಜ್ಯಮಟ್ಟದ 39ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳ ಸಮಾರೋಪ ಸಮಾರಂಭ ನೆರವೇರಲಿದೆ.

ಜಾನಪದ ಕಲಾಮೇಳದಲ್ಲಿ ಭಾಗವಹಿಸುವ ಎಲ್ಲಾ ಕಲಾವಿದರಿಗೆ ಉಚಿತ ಊಟ, ವಸತಿಯ ಜೊತೆಗೆ ಸ್ತ್ರೀ ಕಲಾವಿದರಿಗೆ ಸೀರೆ ಮತ್ತು ಕಣವನ್ನು, ಪುರುಷ ಕಲಾವಿದರಿಗೆ ಪಂಚೆ ಮತ್ತು ಟವಲ್‍ಗಳನ್ನು ನೀಡಲಾಗುವುದು. ಜಾನಪದ ಕಲಾಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಕಲಾವಿದರು ತಮ್ಮ ಜಿಲ್ಲೆಯ ಶ್ರೀ ಆದಿಚುಂಚನಗಿರಿ ಶಾಖಾಮಠ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾಗವಹಿಸುವಿಕೆಯ ಪತ್ರವನ್ನು ಕಡ್ಡಾಯವಾಗಿ ತರತಕ್ಕದ್ದು, ನೋಂದಣಿ ಮಾಡಿಸಿಕೊಳ್ಳುವ ಪ್ರತಿಯೊಬ್ಬರು ಆಧಾರ್‍ ಕಾರ್ಡ್ ಖಡ್ಡಾಯವಾಗಿ ತರಬೇಕು. ಅಧಿಕೃತವಾಗಿ ಪತ್ರ ತಂದಂತಹ ಕಲಾವಿದರಿಗೆ ಮಾತ್ರ ಶ್ರೀಕ್ಷೇತ್ರಕ್ಕೆ ಬಂದು-ಹೋಗುವ ಪ್ರಯಾಣ ಭತ್ಯೆಯನ್ನು ನೀಡಲಾಗುವುದು. ಉತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನವನ್ನು ನೀಡಲಾಗುವುದು. ಕಲಾಮೇಳದಲ್ಲಿ ಭಾಗವಹಿಸುವ ಎಲ್ಲಾ ಕಲಾವಿದರಿಗೂ ವಸ್ತ್ರಗಳನ್ನು ವಿತರಿಸಲಾಗುವುದು.

ಈ ಪ್ರಯುಕ್ತ ಎಲ್ಲಾ ಶುಭ ಕಾರ್ಯಕ್ರಮಗಳನ್ನು ತಮ್ಮ ಪತ್ರಿಕೆಗಳಲ್ಲಿ ಮತ್ತು ಟಿ.ವಿ. ವಾಹಿನಿಗಳಲ್ಲಿ ಪ್ರಸಾರ ಮಾಡುವ ಮೂಲಕ ಜಾನಪದ ಕಲೆಗಳನ್ನು ಪ್ರೋತ್ಸಾಹಿಸಬೇಕಾಗಿ ಮತ್ತು ಹೆಚ್ಚು ಕಲಾವಿದರು/ಭಕ್ತಾದಿಗಳು ಜಾನಪದ ಮೇಳದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಲು ಅನುಕೂಲವಾಗುವಂತೆ ಸಹಕರಿಸಬೇಕೆಂದು ಆಶಿಸುತ್ತೇವೆ.

(ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮಿಗಳವರು)
ಕಾರ್ಯದರ್ಶಿಗಳು
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ