ಸಂಸ್ಕೃತ ದಿನಾಚರಣೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಗಳ ಉದ್ಘಾಟನೆ 24-08-2017

24-08-2017, ಆದಿಚುಂಚನಗಿರಿ
ಸಂಸ್ಕೃತಾಧ್ಯಯನದಿಂದ ಭಾರತೀಯ ಸನಾತನ ಸಂಸ್ಕೃತಿ ಮತ್ತು ಜೀವನ ಮೌಲ್ಯಗಳನ್ನು ಅರಿಯಲು ಅನುಕೂಲ -ಶ್ರೀ ಪ್ರಸನ್ನನಾಥ ಸ್ವಾಮಿಗಳು

ಸಂಸ್ಕೃತ ಭಾಷೆಯ ಮೂಲಕ ರಾಷ್ಟ್ರಾಭಿಮಾನವನ್ನು ಹೊಂದಿ ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ ಮತ್ತು ನಿರ್ವಹಣಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಶೋಧನೆಗಳನ್ನು ಮಾಡಲು ಪ್ರೇರಣೆ ಪಡೆಯಬಹುದು –ಡಾ. ಎನ್.ಎಸ್. ಪೂಜಾರ್

ಪುರಾಣೇತಿಹಾಸ ಪ್ರಸಿದ್ಧವೂ, ದಿವ್ಯಧರ್ಮಪೀಠವೂ ಆಗಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ತನ್ನ ಸಾಂಸ್ಕೃತಿಕ ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಚಟುವಟಿಕೆಗಳಿಂದ ಪ್ರಪಂಚದ ಎಲ್ಲಾ ಕಡೆಗಳಲ್ಲೂ ಜನಮಾನಸದಲ್ಲಿ ಅಚ್ಚಳಿಯದೇ ಶೋಭಿಸುತ್ತಿದೆ ಎಂಬುದು ಸರ್ವಜನ ವಿದಿತವೇ ಆಗಿದೆ.

ಶ್ರೀಕ್ಷೇತ್ರದಲ್ಲಿರುವ ಅನುದಾನಿತ ಶ್ರೀ ಕಾಲಭೈರವೇಶ್ವರ ಸಂಸ್ಕೃತ ವೇದ ಆಗಮ ಮಹಾವಿದ್ಯಾಲಯದ ವತಿಯಿಂದ ಶ್ರೀ ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ಸಂಸ್ಕೃತ ದಿನಾಚರಣೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವನ್ನು ಶ್ರೀಕ್ಷೇತ್ರಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ, ಶ್ರೀಕ್ಷೇತ್ರದ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಏರ್ಪಡಿಸಲಾಗಿತ್ತು.

ಪ್ರಾಚಾರ್ಯರಾದ ಡಾ.ಸಿ.ನಂಜುಂಡಯ್ಯರವರು ಸಂಸ್ಕೃತ ದಿನದ ಮಹತ್ವ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಗಳ ಉದ್ದೇಶಗಳನ್ನು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ವಿವರಿಸಿ, ಇಂದು ಸಂಸ್ಕೃತ ಭಾಷೆಯನ್ನು ಕಲಿಯುವ ಹಂಬಲ ಸಾಮಾನ್ಯ ಜನರಲ್ಲಿಯೂ ಎದ್ದು ಕಾಣುತ್ತಿದೆ. ಸಂಸ್ಕೃತ ಹಸಿವು ಇರುವವರು ಸಾಕಷ್ಟು ಇದ್ದಾರೆ. ಹೀಗಾಗಿ ಆಸಕ್ತರಿಗೆ ಸಂಸ್ಕೃತ ವೇದಾಗಮ ಶಿಕ್ಷಣ ನೀಡುವ ಕೆಲಸ ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ವ್ಯಾಪಕವಾಗಿದೆ ಎಂದರಲ್ಲದೆ, ಅನೇಕ ಸಂಸ್ಕೃತಿ ಭಾಷೆ ಮತಗಳಿಗೆ ಆಶ್ರಯಸ್ಥಾನ ಭಾರತ. ಸರ್ವವನ್ನು ಸಮನ್ವಯ ದೃಷ್ಟಿಯಿಂದ ನೋಡಿದೆ. ನಮ್ಮ ಸಂಸ್ಕೃತಿಯಲ್ಲಿ ಸ್ವದೇಶೋ ಭುವನತ್ರಯಮ್ ಮತ್ತು ವಸುಧೈವಕುಟುಂಬಕಮ್ ಅಂತಹ ಸಹಸ್ರ ಸಂಖ್ಯೆಯ ದಿವ್ಯಮಂತ್ರಗಳು ಅಡಗಿವೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಂತಹ ರಾಜ್ಯದ ರಾಜ್ಯದ ರಾಷ್ಟ್ರೀಯ ಸೇವಾ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಡಾ.ಎ.ಎನ್. ಪೂಜಾರ್‍ರವರು ಎನ್.ಎಸ್.ಎಸ್. ಕಾರ್ಯಕ್ರಮ ಚಟುವಟಿಕೆಗಳ ಉದ್ಘಾಟನೆಯನ್ನು ಸಸಿಗೆ ನೀರೆರೆಯುವ ಮೂಲಕ ನೆರವೇರಿಸಿ ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ನಡೆಯುತ್ತಿರುವ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನೋಡಿ ನನಗೆ ಸಂತೋಷವಾಗಿದೆ ಎಂದರಲ್ಲದೆ ಸಂಸ್ಕೃತ ಭಾಷೆಯ ಮೂಲಕ ರಾಷ್ಟ್ರಾಭಿಮಾನವನ್ನು ಹೊಂದಿ ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ ಮತ್ತು ನಿರ್ವಹಣಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಶೋಧನೆಗಳನ್ನು ಮಾಡಲು ಪ್ರೇರಣೆ ಪಡೆಯಬಹುದು ಎಂದರಲ್ಲದೆ, ಭವ್ಯ ಭಾರತವನ್ನು ಹೇಗೆ ಕಟ್ಟಬೇಕೆಂಬ ವಿಷಯದಲ್ಲಿ ಹಾಗೂ ಭಾವೈಕ್ಯತೆ ಮೂಡಿಸುವಲ್ಲಿಯೂ ರಾಷ್ಟ್ರೀಯ ಸೇವಾ ಯೋಜನೆ ಮಹತ್ತರ ಕಾರ್ಯನಿರ್ವಹಿಸುತ್ತಿದೆ.

ಸಂಸ್ಕೃತ ದಿನೋತ್ಸವದ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀಕ್ಷೇತ್ರದ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಸಂಸ್ಕೃತ ದಿನದ ಮಹೋತ್ಸವವನ್ನು ಹಮ್ಮಿಕೊಂಡಿರುವುದು ತುಂಬಾ ಸಂತೋಷವನ್ನು ತಂದಿದೆ. ಹಿಂದೆ ತಾಯಂದಿರು ಸಂಸ್ಕೃತ ಶ್ಲೋಕಗಳನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದರು. ಹಾಗೆಯೇ ಶ್ರೀಕ್ಷೇತ್ರದಲ್ಲಿ ಸಂಸ್ಕೃತಾಭ್ಯಾಸಕ್ಕೆ ಮಹಿಳೆಯರಿಗೆ-ಪುರುಷರಿಗೆ ಸಮಾನ ಅವಕಾಶವಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ನುಡಿದರು. ಸ್ವಚ್ಛಭಾರತ ನಮಗೆ ಬೇಕೇ ಹೊರತು, ಸ್ವಚ್ಛಂದ ಭಾರತ ನಮಗೆ ಬೇಡ. ಮಾತೃದೇವೋ ಭವ, ಪಿತೃದೇವೋ ಭವ, ಅತಿಥಿದೇವೋ ಭವ, ಆಚಾರ್ಯದೇವೋ ಭವ ಇತ್ಯಾದಿ ಉಪದೇಶಗಳುಸಂಸ್ಕೃತದಲ್ಲಿ ಉಕ್ತವಾಗಿವೆ. ಆದ್ದರಿಂದ ಗುರುಹಿರಿಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿಯಾಗಬೇಕು. ಪರೋಪಕಾರಾರ್ಥಮಿದಂ ಶರೀರಮ್ ಉಪಕಾರವನ್ನು ಮಾಡುವಂತಹ ಗುಣಗಳನ್ನು ನಾವು ಬೆಳೆಸಿಕೊಳ್ಳಬೇಕು. ನಿಸ್ವಾರ್ಥ ಸೇವೆಯನ್ನು ಮಾಡುವವನು ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾನೆ ಎಂದು ನುಡಿದರಲ್ಲದೆ ಸಂಸ್ಕೃತಾಧ್ಯಯನದಿಂದ ಭಾರತೀಯ ಸನಾತನ ಸಂಸ್ಕೃತಿ ಮತ್ತು ಜೀವನ ಮೌಲ್ಯಗಳನ್ನು ಅರಿಯಲು ಅನುಕೂಲ ಎಂದು ಹೇಳಿದರು.

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.)ನ ಆಡಳಿತಾಧಿಕಾರಿಗಳಾದ ಡಾ.ಎ.ಟಿ.ಶಿವರಾಮುರವರು ವೇದಿಕೆಯಲ್ಲಿದ್ದರು. ಸಂಸ್ಕೃತ ಕಾಲೇಜಿನ ಸಾಹಿತ್ಯ ಸಹಾಯಕರಾದ ಡಾ.ಮಧುಸೂದನ ಅಡಿಗರವರು ಸಂಸ್ಕೃತ ಭಾಷೆಯ ಮಹತ್ವವನ್ನು ಕುರಿತು ಮಾತನಾಡಿದರು.

ಕಾರ್ಯಕ್ರಮದ ಮೊದಲಿಗೆ ಸಂಸ್ಕೃತ ವಿದ್ಯಾರ್ಥಿಗಳು ವೇದಘೋಷ, ಪ್ರಾರ್ಥನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಸ್ಥಳೀಯ ಶಾಲಾ ಕಾಲೇಜುಗಳ ಮುಖ್ಯಸ್ಥರುಗಳು ಹಾಗೂ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕರಾದ ಶ್ರೀ ಜಿ.ಶಿವರಾಮೇಗೌಡರವರು, ಸಂಸ್ಕೃತ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರುಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು.